ಮೈಸೂರು, ಜೂನ್ 26: ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರ ಬಗ್ಗೆ ಸಾಕಷ್ಟು ಆರೋಪಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿವೆ. ಜೈಲುಗಳಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ಮೈಸೂರು ಕೇಂದ್ರ ಕಾರಾಗೃಹಕ್ಕೆ (Mysore Prison Audio Case) ಸಂಬಂಧಿಸಿದ ಆಡಿಯೋವೊಂದು ವೈರಲ್ ಆಗಿದೆ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸುತ್ತಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯ ವಾಕ್ಸಮರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಡಿಯೋದಲ್ಲಿರುವುದು ಏನು? ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಜೈಲಾಧಿಕಾರಿಗಳೇ ಶಾಮೀಲಾಗಿದ್ದಾರಾ?

ಹೌದು, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಹಣ ಇದ್ದರೆ ಇಲ್ಲಿ ಎಲ್ಲ ಕೆಲಸಗಳೂ ಸಲೀಸು ಎಂಬಷ್ಟರ ಮಟ್ಟಿಗೆ ಆಡಳಿತ ಹದಗೆಟ್ಟುಹೋಗಿದೆ. ಇದೇ ವಿಚಾರ ರಾಜ್ಯವ್ಯಾಪಿ ಸುದ್ದಿಯಾಗಿದೆ. ಇದರ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಸರ್ಕಾರವನ್ನು ತರಾ ಟೆಗೆ ತೆಗೆದುಕೊಂಡಿದೆ.

ಕಾರಾಗೃಹದಲ್ಲಿ ಕಾಸು ಕೊಟ್ರೆ ಕೈಲಾಸ ರಾಜ್ಯ ಕಾಂಗ್ರೆಸ್ ಸರ್ಕಾರ ಜೈಲಿನಲ್ಲಿರುವ ಕೊಲೆಗಡುಕರು, ಅತ್ಯಾಚಾರಿಗಳು, ಸಮಾಜಘಾತುಕರಿಗೆ ರಾಜಾತಿಥ್ಯ ನೀಡಿ ಸಾಕುತ್ತಿದೆ.! ಮೈಸೂರು ಕಾರಾಗೃಹದಲ್ಲಿ ಕಾಸು ಕೊಟ್ರೆ ಕೈಲಾಸ.! ಕೈದಿಗಳಿಗೆ ಮದ್ಯ, ಗಾಂಜಾ, ಮೊಬೈಲ್‌ನೊಂದಿಗೆ ರಾಜಾತಿಥ್ಯ ಸಿಗುತ್ತಿದ್ದರೂ ಅಸಮರ್ಥ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕಾಣದಂತೆ ಮಾಯವಾಗಿದ್ದಾರೆ ಎಂದು ಬಿಜೆಪಿ ಕಟುವಾಗಿ ದೂರಿದೆ. ಅಕ್ರಮವಾಗಿ ಸಿಗುವ ಒಂದೊಂದು ವಸ್ತುವಿಗೆ ಒಂದೊಂದು ರೇಟ್‌ ಫಿಕ್ಸ್ ಮಾಡಲಾಗಿದೆ ಎಂದು ಖೈದಿಯೇ ಬಿಚ್ಚಿಟ್ಟಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಬಿಜೆಪಿ ಆಗ್ರಹಿಸಿದ್ದಾರೆ

ಗಾಂಜಾ, ಮೊಬೈಲ್ ಪೂರೈಕೆ ಬೆಲೆ ಎಷ್ಟು ಗೊತ್ತೆ? ಮೈಸೂರು ಕಾರಾಗೃಹದಲ್ಲಿ ಖೈದಿಗಳ ಬಳಿಕ ಹಣ ಪಡೆದು ಗಾಂಜಾ, ಮೊಬೈಲ್ ಇತರ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕವೆಂಬಂತೆ ಖೈದಿ ಹಾಗೂ ವಕೀಲರ ಮಧ್ಯ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಖೈದಿ ಬಚ್ಚಾಖಾನ್ ವಕೀಲರ ಮಧ್ಯದ ಗಾಂಜಾ, ಮೊಬೈಲ್ ಸರಬರಾಜು ಬಗೆಗಿನ ಆಡಿಯೋ ವೈರಲ್ ಆಗಿದೆ. ಜೈಲಿನಲ್ಲಿ ಕಾಂಚಾಣ ಕೊಟ್ಟರೆ ಏನುಬೇಕಾದರೂ ಸಿಗುತ್ತದೆ. 20 ಸಾವಿರ ರೂಪಾಯಿ ಕೊಟ್ಟರೆ, ಕೀಪ್ಯಾಡ್ ಇಲ್ಲವೇ ಸ್ಕ್ರೀನ್ ಟಚ್ ಆಂಡ್ರಾಯ್ಡ್ ಮೊಬೈಲ್ ಖೈದಿಗಳ ಕೈಗೆ ಸಲೀಸಾಗಿ ಸಿಕ್ಕಿಬಿಡುತ್ತದೆ. ಇನ್ನೂ 10 ಸಾವಿರ ರೂಪಾಯಿ ಕೊಟ್ಟರೆ ಖೈದಿಗಳು ಇದ್ದ ಜೈಲಿನ ಕೊಠಡಿಗೆ ಮತ್ತೇರಿಸುವ ಗಾಂಜಾ ಸರಬರಾಜು ಆಗುತ್ತದೆ. ಇದಕ್ಕೆ ಜೈಲಾಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಗಂಭಿರ ಆರೋಪ ಕೇಳಿ ಬಂದಿದೆ.

ಯಾವೆಲ್ಲ ಅಧಿಕಾರಿಗಳು ಶಾಮೀಲು? ಮೈಸೂರು ಜೈಲಿನ ಜೈಲಿನ ಹೆಡ್ ವಾರ್ಡರ್ ಉಮೇಶ್ ದೊಡ್ಡಮನಿ, ಜೈಲು ಅಧೀಕ್ಷಕ ರಮೇಶ್, ಜೈಲರ್ ಧರಣೇಶ್ ವಿರುದ್ಧವು ಅರೋಪ ಕೇಳಿ ಬಂದಿದೆ. ಕೊಲೆ, ಹಲ್ಲೆ, ಕಳ್ಳತನ, ಸಮಾಜಘಾತುಕ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲು ಸೇರಿದವರಿಗೆ ಈ ಅಧಿಕಾರಿಗಳು ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗೃಹ ಸಚಿವರು ಏನು ಹೇಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.